ಪೀಕಾರ್, ಆಗಸ್ತೆ
	1884-1962.  ಸ್ವಿಟ್ಸರ್ಲೆಂಡಿನ ಭೌತವಿಜ್ಞಾನಿ.  ವಾಯುಮಂಡಲದ ಅಗಮ್ಯ ಔನ್ನತ್ಯಗಳನ್ನು (16-17 ಕಿ.ಮೀ.) ಬಲೂನಿನ ನೆರವಿನಿಂದ ಐದಿದ ಮಹಾಸಾಹಸಿ.  1884 ಜನವರಿ 28ರಂದು ಆಗಸ್ತೆ ಮತ್ತು ಜೀನ್ ಎಂಬ ಅವಳಿ ಗಂಡುಮಕ್ಕಳ ಜನನವಾಯಿತು.  ತಂದೆ ಹಿರಿಯ ಪೀಕಾರ್ ಬೇಸಲ್ ವಿಶ್ವವಿದ್ಯಾಲಯದಲ್ಲಿ ರಸಾಯನವಿಜ್ಞಾನ ಪ್ರಾಧ್ಯಾಪಕ ; ಅವನ ಸೋದರ ಪಾಲ್ ಪ್ರಸಿದ್ಧ ಎಂಜಿನಿಯರ್ ಹಾಗೂ ವಿನ್ಯಾಸಕಾರ, ನಯಾಗರಾ ಜಲಪಾತಕ್ಕೆ ಮೊದಲ ತಿರುಬಾನಿಯನ್ನು ಆಲೇಖಿಸಿದವ.  ಇಂಥ ಪ್ರತಿಭಾವಂತರ ಪೀಳಿಗೆಯಲ್ಲಿ ಹುಟ್ಟಿ ಬೆಳೆದ ಆಗಸ್ತೆ ಮತ್ತು ಜೀನ್ ಬುದ್ಧಿವಂತ ಹಾಗೂ ಸಾಹಸಿ ವಿದ್ಯಾರ್ಥಿಗಳೆಂದು ಹೆಸರುಗಳಿಸಿ ಡಾಕ್ಟರೇಟ್ ಪದವಿಗಳನ್ನು ಪಡೆದದ್ದು ನಿರೀಕ್ಷಿತವೇ-ಆಗಸ್ತೆ ಭೌತವಿಜ್ಞಾನದಲ್ಲಿ ಮತ್ತು ಜೀನ್ ರಸಾಯನವಿಜ್ಞಾನದಲ್ಲಿ.  ಆಗಸ್ತೆ ಜೂರಿಕ್ಕಿನಲ್ಲೇ ಭೌತವಿಜ್ಞಾನ ಅಧ್ಯಾಪಕನಾಗಿ ನೆಲೆಸಿದ.

	ಚಿಕ್ಕಂದಿನಿಂದಲೂ ಪೀಕಾರ್‍ನಿಗೆ ಬಲೂನುಗಳ ಹಾರಾಟ ಮತ್ತು ಆಕಾಶಬುಟ್ಟಿಗಳಲ್ಲಿ ಮೇಲೆರಲು ಬಲೂನುಗಳ ಬಳಕೆ ಇವುಗಳಲ್ಲಿ ಶಾಸ್ತ್ರೀಯ ಆಸಕ್ತಿ ಇತ್ತು.  ಅಧ್ಯಾಪಕನಾದ ಮೇಲೆ ಇವನಿಗೆ ಉಪಯುಕ್ತವಾದ ಭೌತತತ್ತ್ವ ಅಧ್ಯಯನ ಮತ್ತು ಈ ವಿಷಯಗಳ ಮೇಲೆ ನಡೆಯುತ್ತಿದ್ದ ಚರ್ಚಾಕೂಟ, ಸಮ್ಮೇಳನಗಳಲ್ಲಿ ಭಾಗವಹಿಸುವುದು ಸಹಜವಾಗಿ ಹೆಚ್ಚಿತು.  ಇವನ ಆಸಕ್ತಿಗೆ 1922ರಲ್ಲಿ ಹೊಸನೆಲೆ ಲಭಿಸಿತು.  ಆಗ ಬ್ರಸೆಲ್ಸಿನಲ್ಲಿ ಅನ್ವಿತ ಭೌತವಿಜ್ಞಾನ ಪ್ರಾಧ್ಯಾಪಕ ಪೀಠ ಏರ್ಪಟ್ಟು ಅದನ್ನು ಅಲಂಕರಿಸಲು ಇವನಿಗೆ ಕರೆ ಬಂತು.  ಸ್ವತಃ ತಂತ್ರವಿದ್ಯೆ ಮತ್ತು ಎಂಜಿನಿಯರಿಂಗ್ ಅಭ್ಯಸಿಸಿದ್ದ ಪೀಕಾರ್ ಆ ಸ್ಥಾನವನ್ನು ಸಂತೋಷದಿಂದ ಸ್ವೀಕರಿಸಿ ಉತ್ಸಾಹದಿಂದ ಪ್ರಯೋಗರಂಗಕ್ಕೆ ಇಳಿದ.  ವಿಶ್ವಕಿರಣಗಳು ಎಂಬ ವಿಷಯ ಆಗಿನ ಒಂದು ಮುಖ್ಯ ಸಂಶೋಧನ ಸಮಸ್ಯೆ.  ಭೂಮಿಯಿಂದ ಮೇಲೆ ಹೋದಂತೆ ಇವುಗಳ ಬಲಗಳಲ್ಲಿ ಬದಲಾವಣೆ ಆಗುವುದು ತಿಳಿದಿತ್ತು.  ಆದರೆ ಅಪಾಯಕಾರಿಯಾದ ವಿರಳವಾತಾವರಣ ಉಳ್ಳ 15 ಕಿ.ಮೀ. ಎತ್ತರ ಪ್ರದೇಶಗಳಲ್ಲಿ ವಿಶ್ವಕಿರಣ ಅಧ್ಯಯನ ನಡೆಸುವುದು ಸಮಸ್ಯಾತ್ಮಕವಾಗಿತ್ತು.   ಇದಕ್ಕೆ ಬಲೂನುಗಳನ್ನು ಉಪಯೋಗಿಸಲು ನಿರ್ಧರಿಸಿ ಪೀಕಾರ್ ಪ್ರಯೋಗಗಳನ್ನು ಕೈಗೊಂಡ.  1930ರ ವೇಳೆಗೆ ಉಪಕರಣಗಳು ಮತ್ತು ಪ್ರಯೋಗಕಾರರನ್ನು ಒಳಗೊಂಡ ಆವರಣವನ್ನು ನಿರೀಕ್ಷಿತ ಎತ್ತರಕ್ಕೆ ಕೊಂಡೊಯ್ಯಬಲ್ಲ ವಿಶೇಷ ರೀತಿಯ ಬಲೂನು ಸಿದ್ಧವಾಯಿತು.  ಆವರಣ ಹೊರಗಿನ ವಾತಾವರಣದಿಂದ ಸಂಪೂರ್ಣ ರಕ್ಷಿತವಾಗಿ ಪ್ರಯೋಗಕಾರರಿಗೆ ಸರಿಯಾದ ಸಮ ಒತ್ತಡದಲ್ಲಿ ವಾಯುವನ್ನು ಒದಗಿಸುವ ಯಂತ್ರದಿಂದ ಕೂಡಿತ್ತು.  ಬಲೂನು ಬಲು ದೊಡ್ಡದಾಗಿ ಮೇಲೇರುತ್ತಿದ್ದ ಹಾಗೆ ತನ್ನ ಪೂರ್ಣ ಪ್ರಮಾಣಕ್ಕೆ ಉಬ್ಬುವಂತೆ ಅಳವಡಿಸಲಾಗಿತ್ತು.  ಇವಕ್ಕೆಲ್ಲ ಬೆಲ್ಜಿಯಮ್ ಸರ್ಕಾರ ಧನಸಹಾಯ ನೀಡಿತು.

	1931ರ ಮೇ 27 ರಂದು ಪೀಕಾರ್ ತನ್ನ ಸಹೋದ್ಯೋಗಿ ಪಾಲ್ ಕಿಪ ಫರ್ ಸಮೇತ ಬಲೂನಿನಲ್ಲಿ ಅಂತರಿಕ್ಷಗಾಮಿಯಾದ.  ಅವರು 15,781 ಮೀಟರ್ ಎತ್ತರ ತಲುಪಿದರು.  ಆದರೆ ಪೂರ್ಣ ಪ್ರಮಾಣಕ್ಕೆ ಉಬ್ಬಿದ ಬಲೂನಿನ ಕವಾಟ ಬಿಗಿಯಾಗಿ ಕಚ್ಚಿಕೊಂಡು ಅಲ್ಲಿಂದ ಭೂಮಿಗೆ ಇಳಿಯುವ ಪ್ರಯತ್ನವನ್ನು ನಿಷ್ಪಲಗೊಳಿಸಿತು.  ಹಗಲು ಕಳೆದು ರಾತ್ರಿಯ ತಂಗಾಳಿ ಬೀಸಿದಾಗ, ಅವರ ಸುದೈವದಿಂದ ಬಲೂನಿನ ಗಾಳಿ ಸಂಕೋಚಿಸಿ ಕವಾಟವನ್ನು ಸಡಿಲಿಸುವುದು ಅವರಿಗೆ ಸಾಧ್ಯವಾಯಿತು.  ಆಸ್ಟ್ರಿಯಾದ ಭಾರಿ ಮಂಜುಗಡ್ಡೆಯ ಮೇಲೆ ನಿಧಾನವಾಗಿ ಇಳಿದರು.  ಮೇಲಿನ ವಿರಳ ವಾತಾವರಣದಲ್ಲಿ ನಾಶವಾದರೇನೋ ಎಂದು ಚಿಂತಿತರಾಗಿದ್ದ ಜನರಿಗೆ ಇವರ ಸಮಾಚಾರ ಸಿಕ್ಕಿತು.  ಜನತ ಜೂರಿಕ್ ಮತ್ತು ಬ್ರಸೆಲ್ಸಿನಲ್ಲಿ ಅವರಿಗೆ ಅಭೂತಪೂರ್ವ ಸ್ವಾಗತ ಕೊಟ್ಟಿತು.  ಆಗಸ್ತೆ ಪೀಕಾರ್ ಖ್ಯಾತ ಪುರುಷನಾದ.  ಮುಂದಿನ ಪ್ರಯೋಗಗಳು ದಿನದಿನಕ್ಕೆ ಹೆಚ್ಚು ಹೆಚ್ಚು ಯಶಸ್ವಿಯಾಗಿ ನಡೆದುವು.  ಮರುವರ್ಷ ಪೀಕಾರ್ ಆಕಾಶ ಬುಟ್ಟಿಯಲ್ಲಿ ಕುಳಿತು (ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ) 18,665 ಮೀಟರ್ ಮೇಲೇರಿದ.  ಈತನ ಬಲೂನಿನ ಮಾದರಿ ಇಂದಿಗೂ ವಿಮಾನದ ಒಂದು ಮುಖ್ಯ ಅಂಗವಾಗಿದೆ.

	ಈ ಮಧ್ಯೆ ಪೀಕಾರನ ಆಸಕ್ತಿ ಸಮುದ್ರದ ಆಳಗಳಲ್ಲಿ ನಡೆಯುತ್ತಿದ್ದ ಸಂಶೋಧನೆಯ ಕಡೆಗೆ ಹೊರಳಿತು.  ಆಗ ಆಳಗಳಲ್ಲಿ ಶೋಧನೆ ನಡೆಸಲು ಬಲು ಭಾರವಾದ ಹಾಗೂ ಸಂರಕ್ಷಿತವಾದ ಚಿಕ್ಕ ಆವರಣಗಳನ್ನು ಬಲಿಷ್ಠ ಹಗ್ಗಗಳ ಮೂಲಕ ನೀರಿನೊಳಗೆ ಇಳಿಬಿಡುತ್ತಿದ್ದರು.  ಇದರಿಂದ ಆಯಾ ಸ್ಥಳಗಳಲ್ಲಿ ಮಾತ್ರ ಸಂಶೋಧನೆ ಅತಿ ಸೀಮಿತವಾಗಿ ನಡೆಯುತ್ತಿತ್ತು.  ಪೀಕಾರ್ ಇನ್ನೊಂದು ಮಾರ್ಪಾಡು ಮಾಡಿದ.  ಆವರಣಗಳು ಬೇಕಾದಾಗ ಮಾತ್ರ ಹೆಚ್ಚು ಭಾರ ಹೊಂದುವಂತೆ ತೂಕದಗಟ್ಟಿಗಳನ್ನು ಒದಗಿಸಿದ.  ಇವನ್ನು ನೀರಿನಲ್ಲಿ ಸಡಿಲಾಗಿ ಬಿಟ್ಟು ಆವರಣ ಮೇಲೇರಲು ಅಥವಾ ಬಿಗಿಯಾಗಿ ಸೆಳೆದುಕೊಂಡು ಇವುಗಳ ಪ್ರಭಾವದಿಂದ ಕೆಳಗಿಳಿಯಲು ಈ ಉಪಾಯದಿಂದ ಸಾಧ್ಯವಾಯಿತು.  ಆವರಣಗಳನ್ನು ಆಧರಿಸಲು ಆತ ತೇಲುಗಳನ್ನು ನಿಯೋಜಿಸಿದ.  ಇವು ನೀರಿಗಿಂತ ತುಂಬಾ ಹಗುರಾಗಿದ್ದು ನೀರಮೇಲೆ ತೇಲುತ್ತಿದ್ದು, ಎಲ್ಲಿಗೆ ಬೇಕಾದರಲ್ಲಿಗೆ ಶೋಧಕಾವರಣಗಳನ್ನು ಕೊಂಡೊಯ್ಯಲು ಸಮರ್ಥವಾಗಿದ್ದುವು.  ಇದರಿಂದ ಒಳಸಮುದ್ರ ಶೋಧನೆ ಭರದಿಂದ ಸಾಗಲು ಅನುಕೂಲವಾಯಿತು.  ಜೊತೆಗೆ ಇದೇ ತತ್ತ್ವದ ಆಧಾರದ ಮೇಲೆ ಪೀಕಾರನ ಪುತ್ರ ಜೇಕಸ್ ಪೀಕಾರ್ ಜಲಾಂತರ್ಗಾಮಿಗಳನ್ನು ರಚಿಸುವುದು ಕೂಡ ಸಾಧ್ಯವಾಯಿತು.  ಆಗಸ್ತೆ ಪೀಕಾರನ ಜಲಂತರ್ಗಾಮಿಗೆ ಬೇಥಿಸ್ಕಾಫ್ ಎಂದು ಹೆಸರು.  

	ಆಗಸ್ತೆ ಪೀಕಾರ್ 1962 ಮಾರ್ಚ್ 24ರಂದು ಹೃದಯಾಘಾತದಿಂದ ಮರಣ ಹೊಂದಿದ.	(ವೈ.ವಿ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ